ಬಂಧು ಬಳಗ
ಚನ್ನ ಬಸವ ದೇವರು ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬದವರ ಬಗ್ಗೆ ಬರೆಯಲು ಇಷ್ಟಪಡುತ್ತಿದ್ದರು. ಈ ಸಂಗ್ರಹವು ಸ್ನೇಹಿತರು, ಪುತ್ರರು, ಹೆಂಡತಿ ಮತ್ತು ಸಂಬಂಧಿಕರ ಬಗ್ಗೆ ಅವರ ಆಲೋಚನೆಗಳನ್ನು ಪ್ರತಿಬಿಂಬಿಸುತ್ತದೆ. ಕೆಲವೊಮ್ಮೆ ಹಾಸ್ಯದೊಂದಿಗೆ, ಕೆಲವೊಮ್ಮೆ ಆತ್ಮಾವಲೋಕನದೊಂದಿಗೆ, ಪ್ರಶ್ನೆ ಮಾಡುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ವಿಶಿಷ್ಟ ಗುಣಗಳನ್ನು ಎತ್ತಿ ತೋರಿಸುತ್ತಾರೆ. ಮಾನವ ಸಂಬಂಧಗಳ ಶ್ರೀಮಂತಿಕೆಯನ್ನು ಕೊಂಡಾಡುವ ಮೂಲಕ ತಮಗೆ ಹತ್ತಿರವಿರುವ ಜನರ ಸೂಕ್ಷ್ಮ ಚಿತ್ರಣವನ್ನು ನೀಡುತ್ತಾರೆ.
Relatives & Friends
Channa Basava Devaru cherished writing about his friends and family, capturing their essence in his vachanas. This collection reflects his thoughts on friends, sons, wife, and relatives, sometimes with humor, sometimes with introspection, questioning character and highlighting the unique qualities of each individual. Through his verses, Devaru offers a heartfelt and nuanced portrayal of the people closest to him, celebrating the richness of human relationships.
ಮನೆ ಅವರು
ಅನುಸೂಯ
18.10.1992
ನನ್ನ ಹೆಂಡತಿ ಹೆಸರು ಅನುಸೂಯ
ಮನೆಯಲ್ಲಿ ಪೂರ್ತಿ ಅವಳದೇ ವ್ಯವಸಾಯ
ಪ್ರೀತಿಯಲ್ಲೇ ಮಾಡುವಳು ಜೀವನದ ಬೇಸಾಯ
ಯಾವಗಲೋ ಒಮ್ಮೇ ಕುಡಿವಳು ಕಷಾಯ
ತೆಗೆದುಕೊಳ್ಳುವುದಿಲ್ಲ ಯಾರೊಬ್ಬರ ಸಹಾಯ
ಹುಡುಕಿದರೂ ಸಿಗುವುದಿಲ್ಲ ಮನದಲ್ಲಿ ಸಂಶಯ
ಬಿಡದೇ ಪಾಲಿಸುವಳು ಭಕ್ತಿಯಿಂದ ಸಂಪ್ರದಾಯ
ದಿನಪೂರ್ತಿ ಮನೆಗೆಲಸ ಮಾಡುವುದೇ ಅವಳ ಆಶಯ
ಇಷ್ಟಾದರೂ ಮರೆಯುವುದಿಲ್ಲ ತನ್ನ “ವಿಷಯ”.
ಅವಿನಾಶ
18.10.1992
ಬಲು ಬಲು ತುಂಟ ನಮ್ಮ ಅವಿನಾಶ
ಸಿಹಿಗಾಗಿ ಕಾಯುತ್ತಿರುವನು ಆಗಾಗ ಅವಕಾಶ
ಇಲ್ಲದಿದ್ದಲ್ಲಿ ನೋಡುವನು ಆಕಾಶ
ಇದ್ದಾಗಲೆಲ್ಲಾ ತಿಂದು ಮುಗಿಸುವನು ಸಾವಕಾಶ
ಸಿಹಿ ಜಾಸ್ತಿ ತಿಂದದ್ದಕ್ಕೆ ಸಣ್ಣದಾಗಿರುವುದು ಜೀವಕೋಶ
ತುಂಬಿಸಿಕೊಳ್ಳಬೇಕಾಗಿರುವುದು ಜ್ಞಾನಕೋಶ
ಅಮ್ಮನಿಗೆ ಸಹಾಯ ಮಾಡುವುದೇ ಅವನಲ್ಲಿರುವ ಅಂಶ
ಅಪರೂಪಕ್ಕೆ ಸಿಟ್ಟು ಬಂದಾಗ ನೋಡಬೇಕು ಅವನ ರೋಶ
ತೇಜಸ್ವಿ
18.10.1992
ನನ್ನ ಮೊದಲನೇ ಮಗನೇ ತೇಜಸ್ವಿ ನಿದ್ರೆ ಮಾಡುವದರಲ್ಲಿ ಮಹಾ ತಪಸ್ವಿ ಆದರೂ ಗಣಿತದಲ್ಲಿ ನೂರಕ್ಕೆ ನೂರು ತೆಗೆದ ಯಶಸ್ವಿ.
ಗಿರಿಜ
11.11.1992
ನನ್ನ ತಂಗಿಯ ಹೆಸರು –ಗಿರಿಜ,ಜೀವನದಲ್ಲೇ ಸಿಗುವುದು ಅಪರೂಪ- ರಜ,ಹಣದುಬ್ಬರ ಮಾಡಿತು ದೂರ –ಮಜ,ಯಜಮಾನರು ತಿನ್ನುವುದು ಜಾಸ್ತಿ- ಕಡಲೆಬೀಜ,ಅವಳಲಿಲ್ಲ ಕಾರಣಗಳು ಮಾಡಲಿಕೆ-ಸಜಾ,ಮನೆಯಲ್ಲಿ ಮಗ ’ಚಂದ್ರ’ನೆ- ರಾಜಾ,ಮನೆಯಲ್ಲಿ ಮೋಜು ಮಾಡಿದವರಿಗೆ ಸಿಕ್ಕಿತು –ವಜಾ.
ಚಂದ್ರ
18.10.1992
ನನ್ನ ತಂಗಿಯ ಮಗ ಚಂದ್ರ,
ಅವನ ಮನಸು ಬಲು ಸುಂದರ,
ಸಮಸ್ಯೆಗಳು ಮಾಡುತ್ತಿವೆ ಭಾರ,
ನೆರೆಹೊರೆಯವರಿಗೆ ಸಿಗುವುದು ಸಮಾಚಾರ,
ಸಹಾಯದ ಮೂಲಕ ಮಾಡುವನು ಪರಿಹಾರ,
ದಣಿವು ತೀರಿಸಲಿಕೆ ಕಾಯುವನು ಭಾನುವಾರ,
ಚಿಕ್ಕವನಾದರೂ ಹೃದಯದಲ್ಲಿ ಸಿಗುವುದು ಪ್ರೀತಿಯ ಸಾಗರ,
ತಂಗಿಯರಿಬ್ಬರಿಗೆ ಇವನೇ ಬಂಗಾರ,
ಹುಡುಕಿದರೂ ಸಿಗುವುದಿಲ್ಲ ಮನಸ್ಸಿನಲ್ಲಿ ಖಾರ,
ಇಷ್ಟೆಲ್ಲ ಇದ್ದರೂ ಕೆಲವರು ಒಪ್ಪುವುದಿಲ್ಲ ಇವನ ವ್ಯವಹಾರ,
ಇದಕ್ಕೆಲ್ಲ ಕಾರಣ ಇವನ ರಾಜಕೀಯ ಸರದಾರ,
ಕಾಯುತ್ತಿರುವನು ಸಮಯ ಏರಲಿಕೆ ಬಂಗಾರದ ಶಿಖರ,
ಕಾರಣ ಏನೇ ಕೇಳಿದರೂ ಹೇಳಲಿಲ್ಲ ವಿವರ.
ಚನ್ನಬಸವ
07.11.1992
ಇವ ನಮ್ಮ ಕೊಳ್ಳೇಗಾಲದ ಚನ್ನಬಸವ,
ಮಾತಿನಲ್ಲೂ ನಡೆಯಲ್ಲೂ ಮೃದು ಸ್ವಭಾವ,
’ಗುಂಡು’ ಹಾಕಿದಾಗ ನೋಡಬೇಕು ಅವನ ವೈಭವ,
ಆ ಪರಮಾತ್ಮನನ್ನು ಮೀರಿಸುವನು ಈ ದೇವ,
ತನ್ನ ಊರಲ್ಲಿದ್ದಾಗ ತೋರಿಸುವನು ಪ್ರಭಾವ,
ಗುರು ಅಂತರಂಗದಲ್ಲಿದ್ದಾಗ ಬಾಯಿಂದ ಹೊರಬರುವುದು ಆಗಿದ್ದ ಅನುಭವ,
ಬೆಳಗ್ಗೆಯಿಂದ ಸಂಜೆಯವರೆಗೆ ಮಾತ್ರ ಇವ ಮಾನವ.
ದೊಡ್ಡಣ್ಣ
ನಮ್ಮ ಬಸವಣ್ಣ ಹಿರಿಯಣ್ಣನ ಬಗ್ಗೆ - [ಬಸವೇಶ್ವರ ದೇವರು ಸನ್ ಆಫ್ ಭಸ್ಮಾಂಗದೇವರು]
15.02.1995 -11.45 p.m.
’ಅನಾಥ’ ಆದೆಯೆಲ್ಲೊ! ಅಯ್ಯಯ್ಯೋ!!
ಅನಾಥ ಆದೆಯೆಲ್ಲೊ ||ಪ||
ಅತಿ ಆಸೆ ಮಾಡಿತೆಲ್ಲೊ!
ಮೂಕನಾಗಿ ಕುಳಿತಿಯೆಲ್ಲೋ !!
ಕೊರಗಿ ಕೊರಗಿ ಹೋದೆಯೆಲ್ಲೋ!!!
ನಿನ್ನ ಅತಿಆಸೆ ನಿನ್ನೇ ತಿಂದು ತೇಗಿತೆ ಅಯ್ಯಯ್ಯೋ ||೧||
ಬೇಕಾಬಿಟ್ತಿ ಬೈದೆಯೆಲ್ಲೋ !
ಉಗುಳಿ ಉಗುಳಿ ಹೋದೆಯೆಲ್ಲೊ!!
ದುರಾಸೆ ವ್ಯಕ್ತಿ ಆದೆಯೆಲ್ಲೋ!!
ಲಪಟಾಯಿಸಲು ಹೋಗಿ ಸಿಕ್ಕಿ ಹೋದೆಯೆಲ್ಲೋ ಅಯ್ಯಯ್ಯೋ !! ||೨||
ಮೋಸ ಹೆಂಡತಿಯ ನಂಬಿದೆಯೆಲ್ಲೋ!
ನಾಟಕ ಆಡೋ ಮಕ್ಕಳ ನಂಬಿದೆಯಲ್ಲೋ !!
ನೈಜ ವ್ಯವಹಾರ ತಿಳಿಯದಾಯಿತಲ್ಲೋ!!!
ಕೊನೆಗೆ ಬಿಕ್ಕಿ ಬಿಕ್ಕಿ ಅತ್ತೆಯಲ್ಲೋ ಅಯ್ಯಯ್ಯೋ || ೩||
ತಮ್ಮಂದಿರ ದೂರ ಇಟ್ಟೆಯೆಲ್ಲೋ !
ತಂಗಿಯ ಬೈದು ನೀ ದೂರ ಆದೆಯಲ್ಲೋ!!
ಕೋಪ ನಿನ್ನೆ ತಿಂದಿತೆಲ್ಲೋ !!
ನಿನ್ನ ಸಂಸಾರ ಕೈಕೊಟ್ಟಿತಲ್ಲೋ !! ಅಯ್ಯಯ್ಯೋ !! ||೪||
ಕ್ರೋಧ ನಿನ್ನ ತುಳಿಯಿತಲ್ಲೋ!
ಲೋಭಿ ಆಗಿ ಹೋದೆಯೆಲ್ಲೋ!!
ಮೋಹ ನಿನ್ನ ನುಂಗಿತೆಲ್ಲೋ !!!
ಮದ-ಮತ್ಸರ ನಿನ್ನ ಮುಗಿಸಿತೆಲ್ಲೋ!!! ಅಯ್ಯಯ್ಯೋ ||೫||
ತಂಗಿಯ ಶಾಪ ಹಿಡಿಯಿತೆಲ್ಲೊ!
ನಾದಿನಿಯರ ಶಾಪ ತಟ್ಟಿತಲ್ಲೋ!!!
ಹೆಂಗಸರ ಶಾಪ ನಿನ್ನ ತಿಂದಿತೆಲ್ಲೋ !!!
ತಾಯಿಯ ಶಾಪ ನಿನ್ನ ಹಿಡಿಯಿತೆಲ್ಲೋ ಅಯ್ಯಯ್ಯೋ ||೬||
ಆಡಂಬರಕ್ಕೆ ಜೋತು ಬಿದ್ದೆಯೆಲ್ಲೋ !
ಹೆಂಡತಿ ಮಕ್ಕಳ ಚಾಡಿ ನಿನ್ನ ತಿಂದಿತೆಲ್ಲೋ !!
ಬಂಧು-ಬಳಗ ದೂರ ಆಯಿತೆಲ್ಲೋ!!!
ಜೀವನದ ಸಾರ ಗೊತ್ತಾಗಲಿಲ್ಲವೆಲ್ಲೋ ಅಯ್ಯಯ್ಯೋ ||೭||
ನೆಮ್ಮದಿ ಇಲ್ಲದಾಯಿತೆಲ್ಲೋ !
ಶಾಂತಿ ದೂರ ಆಯಿತೆಲ್ಲೋ!!
ಪ್ರೀತಿ ದೂರ ಹೋಯಿತೆಲ್ಲೋ !!!
ಮಮಕಾರ ಇಲ್ಲವಾಯಿತೆಲ್ಲೋ ಅಯ್ಯಯ್ಯೊ ||೮||
ಒಂಟಿಯಾಗಿ ಕುಳಿತೆಯೆಲ್ಲೋ !
ಎಲ್ಲರನ್ನು ದೂರ ಇಟ್ಟೆಯೆಲ್ಲೋ !!
ಪಶ್ಚಾತಪ್ಪ ಇನ್ನೂ ಇಲ್ಲವೆಲ್ಲೋ !!!
ಪ್ರಾಯಶ್ಚಿತ್ತ ಏನು ಎಂದು ಗೊತ್ತಾಗಲಿಲ್ಲವೆಲ್ಲೋ ಅಯ್ಯಯ್ಯೋ || ೯ ||
ನನ್ನ ತಂದೆ
18.4.1994 at Kollegal
By - Tejasvi. B.C., son of Channa Basava Devaru about him
ಕವಿ, ನನ್ನ ತಂದೆ
ಮೂಕ ಪ್ರೇಕ್ಷಕ ನಾನು,
ರವಿ ಮೂಡುವ ಮುನ್ನ,
ರವಿ ಮುಳುಗಿದ ನಂತರ,
ಕಿವಿ ನನ್ನದು ತೆರೆಯಲಾಗದು,
ಕೈ ಕಿವಿ ಬಿಟ್ಟು ಎತ್ತಲಾರದು,
ಚೆನ್ನ, ನನ್ನ ತಂದೆಯ ಕವಿತೆ,
ಇನ್ನು ಚೆನ್ನ ನನ್ನ ತಂದೆಯ ಕವಿತೆಯ ಕೊರತೆ,
ಕೇಳದಿದ್ದರೆ ಕೊಡುವರು ಆದೇಶ,
ಕೇಳಿದರೆ ತಾಳಲಾರೆನು ಉಪದೇಶ
ಕವಿ ನನ್ನ ತಂದೆ
ರವಿ ಕಾಣದ್ದನ್ನು ಕವಿ ಕಂಡ,
ರವಿ ಕೊರೆಯದ್ದನ್ನು ಕವಿ ಕೊರೆದ.
ಸ್ನೇಹಿತರು
ಶಿವಾನಂದ
18.10.1992
ನನ್ನ ಪ್ರಾಣ ಸ್ನೇಹಿತನ ಹೆಸರೇ ಶಿವಾನಂದ
ತಾನು ಕಹಿ ಉಂಡು ಪರರಿಗೆ ಸಿಹಿ ನೀಡುವುದೇ ಅವನಲ್ಲಡಗಿರುವ ಆನಂದ
ಸಂಗೀತದ ಸವಿಯೂಟದಲ್ಲಿ ಅಡಗಿದವನಲ್ಲಿ ಗಾಡನಂದ
ಪ್ರೀತಿ ಹರಿದು ಹೋಗುವುದು ಅವನು ನೋಡಿದಾಗ ಕಂದ
ಮನೆಯಲ್ಲಿ ಆಗಾಗ ದಾಸೋಹ ನಡೆಸಿ ಪಡೆಯುವನು ಭವ್ಯಾನಂದ
ಅನ್ಯರಿಗೆ ತಿಳಿಸದೇ ಒಳಗೊಳಗೇ ಕಷ್ಟಗಳನ್ನು ನುಂಗಿ ಬೆಂದ
ಮನದಲ್ಲಿ ನೆನೆವುದ ಮರೆಯುವುದಿಲ್ಲ ಶ್ರೀಗುರು ಸದಾನಂದ
ಲೀಲಾ
18.10.1992
ನನ್ನ ಸ್ನೇಹಿತ ಶಿವಾನಂದರ ಅರ್ಧಾಂಗಿಯೇ ಲೀಲಾ
ಮನ ಬಿಚ್ಚಿ ಮಾತಾಡಿ ಮನಸ್ಸನ್ನು ‘clean’ ಮಾಡುವುದೇ ಅವರಲ್ಲಿರುವ ಕಲಾ
ಪ್ರೀತಿ ವಿಶ್ವಾಸ ನೋಡಿ ನಡೆಯುವುದು ಬಂಧು ಬಳಗಗಳ ಮೇಳ
ಮನೆಯಲ್ಲಿ ಹುಡುಕಿದರೂ ಸಿಗುವುದಿಲ್ಲ ಜಾತಿಮತಗಳ ಕುಲ
ಮನದಲ್ಲಡಗಿರುವುದು ಪರಿಶ್ರಮದ ಬಾಂದವ್ಯದ ಚೀಲ
ಪರಿಹರಿಸಿಕೊಳ್ಳುವಳು ದಣಿವ, ಕುಡಿದು ಆಗಾಗ ಕೋಕಾ ಕೋಲಾ.
ತಿಮ್ಮೇಗೌಡರು
18.10.1992
ಧನ, ಪ್ರೀತಿ, ವಿಶ್ವಾಸಗಳ ಕಣಜವೇ ನಮ್ಮ ತಿಮ್ಮೇಗೌಡರು,
ಬಹುಮಂದಿ ಜನಗಳಿಗೆ ಆಗಿರುವರು ಯಜಮಾನರು,
ಕಷ್ಟಪರಿಹರಿಸಿಕೊಳ್ಳಲಿಕೆ ಬರುವರು ಆಗಾಗ ಬಡವರು,
ಸಲಹೆ ಪಡೆಯಲು, ಸಮಯ ಕಳೆಯಲು ಹೋಗುವರು ಸ್ನೇಹಿತರು,
ಕಾಯಕಕ್ಕಾಗಿ ತನು ಮನ ಅರ್ಪಿಸಿ ಕಷ್ಟ ಕಾರ್ಪಣ್ಯಗಳ ಅನುಭವಿಸುವರು,
ಇವರ ಮನದಲ್ಲಿ ಅಡಗಿರುವರು ಶ್ರೀನಿವಾಸದೇವರು.
ಸೋಮಸುಂದರ
05.11.1992
ನಮ್ಮೆಲ್ಲರ ಸ್ನೇಹಿತ ಸೋಮಸುಂದರ,
ಬಡವರ ಕಂಡರೆ ಹೃದಯವಾಗುವುದು ಕರುಣಸಾಗರ,
ಹಣದುಬ್ಬರ ಮಾಡುವುದು ಅವನ ಶೋಕಸಾಗರ,
ಒಬ್ಬನೇ ಮಗನಿರುವುದರಿಂದ ಈಗ ಅವನದು ಸುಖಸಾಗರ,
ತಾಯಿ ಆರೋಗ್ಯದಿಂದ್ದಿದ್ದರೆ ಅವನ ಮನಸ್ಸು ಹಗುರ,
ಲಾಟರಿಯಲ್ಲಿ ಲಕ್ಷಗಳು ಸಿಕ್ಕಿದರೆ ಅವನಾಗುತ್ತಾನೆ ಶೃಂಗಾರ,
ತೊಡಿಸುವನು ಮಡದಿಗೆ ಆಗ ಬಂಗಾರ,
ನಂತರ ಮನಸ್ಸು ಏರುವುದು ದೇವರ ಶಿಖರ.
ನಾಗರಾಜ
05.11.1992
ನಮ್ಮ ಬ್ಯಾಂಕಿನಲ್ಲಿರುವ ನಾಗರಾಜ,
ಕನಸ್ಸಿನಲ್ಲಿ ಆಗುವನು ರಾಜ,
ಓದದೇ ಆದನು ಹುಳುಕುಬೀಜ,
ಆದರೆ ವ್ಯವಹಾರದಲ್ಲಿ ನಿಜವಾಗಲೂ ಚಾಮರಾಜ,
ಅಪರೂಪಕ್ಕೆ, ಸಿಗುವುದವನಿಗೆ ರಜ,
’ಓಡಕೆಹಳ್ಳ’ ಊರಿಗೆ ಹೋದರೆ ಆತನಿಗೆ ಮಜ,
ಬ್ಯಾಂಕ್ ನಲ್ಲಿ ಖಾಯಂ ಕೆಲಸ ಸಿಗದೇ ಈಗ ಆಗಿದೆ ಸಜಾ.
ಶರ್ಮ
06.11.1992
ನನ್ನ ನೆನಪಿಗೆ ಆಗಾಗ ಬರುವನು ಸ್ನೇಹಿತ ಶಿವಶಂಕರ ಶರ್ಮ,
ಅವನ ಜೀವನದ ಗುರಿ ತಿಳಿಯದೇ ಆಗಿರುವುದು ಮರ್ಮ,
ಸತ್ಯ ಅಸತ್ಯಗಳ ವಿಮರ್ಶೆಯಲ್ಲಿ ಅವನಿಗೆ ಸತ್ಯವೇ ನಿಗಮ,
ಬ್ಯಾಂಕ್ ಕೆಲಸಗಳಲ್ಲಿ ಕ್ಲಿಷ್ಟ ಸಮಸ್ಯೆಗಳು ಅವನಿಗೆ ಸುಗಮ,
ಸದಾಭಿಪ್ರಾಯಗಳ ಸ್ನೇಹಿತರ ಕಂಡರೆ ಆಗುವುದು ಸಮಾಗಮ,
ಮನಸ್ಸಿಗೆ ವಿರಾಮ ಕೊಡಲು ಸೇದಲು ಕೂತಾಗಲೇ ಅವನಿಗೆ ಸಿಗುವುದು ಆರಾಮ,
ಪ್ರಪಂಚದ ವಿಚಿತ್ರ ರೀತಿಯ ಬೆಡಗಿನ ಜೀವನ ನೋಡಿ ಕೊರಗಿಕೊಳ್ಳುವುದು ಅವನ ಕರ್ಮ.
ಮುರಳೀಧರ
06.11.1992
ನನ್ನ ಪಾಲಿಗೆ ವಿಚಿತ್ರ ಸ್ನೇಹಿತ ಈ ಮುರಳಿಧರ,
ಮೆಣಸಿನ ರೀತಿ ಖಾರದಂತೆಯೇ ಮಾತುಗಳು ನೇರ,
ಮನಸ್ಸು ಮಾತುಗಳು ರೀತಿ ನೀತಿಗಳು ಅವನಲ್ಲಿ ನೀರಾಡಂಬರ,
ಆಡಂಬರದ ವಿಷಯಗಳು ಅವನ ಪಾಲಿಗೆ ನಿರಾಕಾರ,
ಯೋಜನೆಗಳ ಸುಳಿಯಲ್ಲಿ ಕುಳಿತಾಗ ಅವನ ದಾಡಿಯೇ ಭಾರ,
ಮಾತಿನ ಹಾಗೆ ಮನಸು ಸಹ ಬಹಳ ಸುಂದರ.
ಪರಿಚಯದವರು
ನಮ್ಮ ಮಲ್ಲಿಕಾರ್ಜುನ ಸ್ವಾಮಿ
08.03.1994 -8.30 p.m.
ನಮ್ಮ ನೆಚ್ಚಿನ ಬಂಧು ಮಲ್ಲಿಕಾರ್ಜುನ ಸ್ವಾಮಿ,
ಎಲ್ಲ ಕೆಲಸಗಳಲೂ ಜಯಗಳಿಸುವ ಆಸಾಮಿ,
ಆರೋಗ್ಯಕ್ಕಾಗಿ ಸೇವಿಸುವನು ಬಾದಾಮಿ,
ಕೆಲವು ಸ್ನೇಹಿತರ ಪಾಲಿಗೆ ಇವ ಮಹಾಸ್ವಾಮಿ,
ಹೃದಯ ವೈಶಾಲತೆಯಿಂದ ಕೂಡಿದ ನಮ್ಮ ಈ ಸ್ವಾಮಿ,
ಅದಕಾಗಿ ಕಂಡಿದೆ ವಿಶಾಲವಾಗಿ ಈ ಭೂಮಿ,
ಸಂಸಾರ ಜೀವನದಲೂ ಸಹ ಇವ ಮಿತಕಾಮಿ,
ಕಾರಣ ಗೊತ್ತಿಲ್ಲ ಏಕೆ ಆಗಲಿಲ್ಲ ಇವ ನಿಜ ’ಸ್ವಾಮಿ’
ನಮ್ಮ ಮಲ್ಲಿಕಾರ್ಜುನಸ್ವಾಮಿ,
ಬಾದಾಮಿ ತಿಂದು ಆದ ಆಸಾಮಿ,
ಕಾಮಿಯಾಗಿ ಆಗಲಿಲ್ಲ ನಿಜ ಸ್ವಾಮಿ,
ಇವನ ಪಾಲಿಗೆ ಸ್ವರ್ಗ ಈ ಭೂಮಿ.
Boring Master
06.11.1992
ಮಲ್ಲಿಕಾರ್ಜುನ ಸ್ವಾಮಿ ಎಲ್ಲರ ಪಾಲಿಗೆ ಬೋರಿಂಗ್ ಮಾಸ್ಟರ್,
ಅಷ್ಟಲ್ಲದೇ ಕೆಲವರ ಪಾಲಿಗೆ Drilling Master,
ಅವನ ಕೆಲಸದಲ್ಲಿ ಇವನೇ School Master,
ಹಿಡಿದ ಕೆಲಸ ಜಯವಾದಾಗ ಇವ ಆಗಿದ್ದ Ring Master,
ಮನೆಯಲ್ಲಿ ಇವನು ಅಲ್ಲ Head Master,
ಇವ ಸತ್ಯ ತಿಳಿಸಿದಾಗ ಹೇಳುವರು ಎಲ್ಲ Real Master.
ಚಿಕ್ಕಸುಬ್ಬಯ್ಯ
06.11.1992
ಬೆಟ್ಟದಲ್ಲಿ ಎಲ್ಲರಿಗೂ ಗೊತ್ತು ಚಿಕ್ಕಸುಬ್ಬಯ್ಯ,
ಆತನ ಇನ್ನೊಂದು ಹೆಸರು ಗುಂಡಯ್ಯ,
ಬಾಯಿ ಮುಚ್ಚುವುದಿಲ್ಲ ಎಲ್ಲ ರಹಸ್ಯ,
ಗುಂಡು ಹಾಕಿದಾಗ ನೋಡಲು ಅವನು ಅಸಹ್ಯ,
ಅಪರೂಪವಾಗಿ ಮಾಡುವನು ತನ್ನ ಕರ್ತವ್ಯ,
ಗುಂಡಿನ ’ಗುಂ’ನಲ್ಲಿದ್ದಾಗ ತೋರಿಸುವನು ತನ್ನ ಮೈಯ,
ಆನಂದವಾಗಿರಲು ಬೇಕು ಅವನಿಗೆ ಅರಣ್ಯ,
ಗುಂಡು ಹಾಕಿದಾಗ ಕಾಣಿಸುವುದಿಲ್ಲ ಸೂರ್ಯ,
ಪ್ರತಿದಿನ ತಪ್ಪದೆ ಹೋಗುವನು ನೋಡಲು ಮಾದಯ್ಯ.
ಪುಟ್ಟಯ್ಯ
06.11.1992
ಬೆಟ್ಟದಲ್ಲಿರುವ ’ನಿತ್ಯನಿಧಿ’ ಸಂಗ್ರಹಕಾರನು ಈ ಪುಟ್ಟಯ್ಯ,
ಬಹುಪಾಲು ಅಂಗಡಿಯವರಿಗೆ ಇವನು ಮಾವಯ್ಯ,
ನಾವೆಲ್ಲ ನೋಡಿ ಕಲಿಯಬೇಕು ಇವನ ಕರ್ತವ್ಯ,
ನಡೆ ನುಡಿಗಳಲ್ಲೂ ಸಹ ಮಾತುಗಳು ಬಹು ಸೌಮ್ಯ,
ಮುಚ್ಚಿಡುವನು ಯಾವಾಗಲೂ ಬ್ಯಾಂಕಿನ ರಹಸ್ಯ,
ಬೇರೆಯವರಿಗೆ ಹೇಳನು ಮನಸ್ಸಿಗೆ ಆದ ಗಾಯ,
ಆ ’ಮಾದೇಶ’ನನ್ನು ನೆನೆಸಿಕೊಂಡರೆ ಆಗುವುದು ಮಾಯ,
ಇವ ಜಪಿಸುವ ಸದಾ ಆ ಮಾಹಮಂತ್ರ ಮಾದಯ್ಯ.
ಮೆಸ್ ಶ್ರೀನಿವಾಸ
11.11.1992
ನಮ್ಮ ಮೆಸ್ ನ ಒಡೆಯ ಶ್ರೀನಿವಾಸ,
ಮೆಸ್ ಮುಚ್ಚಿದಾಗ ನಮಗೆ ಉಪವಾಸ,
ಕೆಲವು ಸಲ ಬಹಳದಿನ ವನವಾಸ,
ಚಪಾತಿ ಸಾಗು ಇಲ್ಲಿ ಎಷ್ಟ ಸೊಗಸು,
ಸಿಗುವುದಿಲ್ಲ ಊಟದಲ್ಲಿ ಕಸ,
ತಿಂದು ಮುಗಿದ ನಂತರ ಅಚ್ಚು ಕಟ್ಟು ಕಛೇರಿ ಕೆಲಸ,
ಬರುವುದಿಲ್ಲ ಹೊಟ್ಟೆಯಲ್ಲಿ ಉಬ್ಬಸ,
ನಮಗಾಗಿ ಬೇಡ ಅವರ ಪ್ರಯಾಸ,
ಮೆಸ್ನಲ್ಲಿ ನಡೆಯುವುದು ಆಗಾಗ ಸರಸ,
ಏನೇ ಆದರೂ ದರದಲ್ಲಿ ಇಲ್ಲ ವಿರಸ.
ಬೆಟ್ಟದ ಶಂಕರ
11.11.1992
ಬುದ್ದಿವಂತನಾಗಲಿ ಎಂದು ಇಟ್ಟರು ಹೆಸರು ಶಂಕರ,
ಇವನನ್ನು ನಂಬಿದವರು ಹರೋ ಹರ,
ತಿಳಿಯಬೇಕು ಇವನದು ಬರೀ ಆಡಂಬರ,
ಬಡಿದಿದೆ ಇವನಿಗೆ ಗರ,
ಕಾರಣ ಇವನಲ್ಲಿ ಹಣ ಯಾವಾಗಲೂ ಬರ,
ಮಾರಿರುವನ್ನು ಮದುವೆಯಲ್ಲಿ ಕೊಟ್ಟ ಸರ,
ಸಾಲ ತೀರಿಸದಿದ್ದಕ್ಕೆ ಹೊಡೆದಿರುವರು ಕೆರ,
ಬೆಟ್ಟದಲ್ಲಿರುವವರು ಇರಬೇಕು ಎಚ್ಚರ,
ಇವನಾಗಲಿಲ್ಲ ದೇವರಲ್ಲಿ ಕಿಂಕರ,
ಹುಡುಕಿದರೆ ಸಿಗುವುದು ಮನೆಯಲ್ಲಿ ಕುಡಿದ ಬಾಟಲಿನ ಹಾರ.
ಭಾಸ್ಕರ
11.11.1992
ಬ್ಯಾಂಕಿನಲ್ಲಿ ತಾತ್ಕಾಲಿಕವಾಗಿ ಕೆಲಸದಲ್ಲಿದ- ಭಾಸ್ಕರ,
ಅವನ ದೇಹವೇ ಹೇಳಿದೆ ಅವನಿಗೆ ಆರೋಗ್ಯದ- ಬರ,
ಖಾಯಂ ಕೆಲಸ ಸಿಗದೇ ಅವನಿಗೆ ಬಂದಿದೆ- ಗರ,
ಹುಡುಕಿದರೂ ಸಿಗುವುದಿಲ್ಲ ಅವನಲ್ಲಿ ಆಡಂಬರ,
ಅವನಲ್ಲಿ ವ್ಯವಹಾರಗಳು –ಎಚ್ಚರ,
ತೆಳುವಾಗಿದ್ದರಿಂದ ಸವೆಯಲಿಲ್ಲ ಅವನ- ಕೆರ,
ಅವನಿಗೆ ಹೆಂಗಸರು ಅಂದರೆ- ದೂರ,
ಕೆಲಸಗಳಲ್ಲಿ ಕಾರ್ಯದಲ್ಲಿ ತೋರಿಸುವುದಿಲ್ಲ- ಅಂತರ,
ಮಾತು ವ್ಯವಹಾರಗಳು ಅವನಲ್ಲಿ- ನೇರ,
ಬಂಧು-ಬಳಗಳಲ್ಲಿ ಅವನ ಸ್ನೇಹ –ಅಪಾರ,
ಪ್ರತೀಕಾರಕ್ಕೆ ಅವನಲ್ಲಿ ಇಲ್ಲ – ಪ್ರತೀಕಾರ,
ಮಹದೇಶ್ವರನಲ್ಲಿ ಅವನು –ಕಿಂಕರ.
ಮಹದೇವಪ್ಪ
11.11.1992
ನಂಜುಂಡೇಶ್ವರ ಭವನದ ಒಡೆಯ ಮಹದೇವಪ್ಪ,
ವರ್ಷಕ್ಕೊಮ್ಮೆ ಹೋಗುವನು ನೋಡಲು ಅಯ್ಯಪ್ಪ,
ಕಾಣಲು ಅಲ್ಲೂ ಮಹದೇಶ್ವರನಪ್ಪ,
ಮಹದೇಶ್ವರನಲ್ಲಿ ಕಿಂಕರನಪ್ಪ,
ಪ್ರತಿ ದಿನ ತಪ್ಪದೇ ಹೋಗುವನು ದರ್ಶನಕಪ್ಪ,
ಲಕ್ಷಿ ಕಟಕ್ಷ ಒದಗಿದೆಯಪ್ಪ,
ತಮ್ಮ ರಾಜು-ನಾಗ ಇವನಿಗೆ ಬಂಗಾರಪ್ಪ,
ದೇವರುಗಳ ಕಂಡರೆ ಭಯಭಕ್ತಿ ಜಾಸ್ತಿಯಪ್ಪ,
ತಂಗಿ -ತಮ್ಮಂದಿರ ಮದುವೆ ಇವನೆ ಮಾಡಿದನಪ್ಪ,
ಅರಿಷಡ್ವರ್ಗಗಳು ಇವನಲಿ ದೂರವಿರುವುದಪ್ಪ.
ಪ್ರಭಾಕರ
24.5.1993
ದೇವಸ್ಥಾನದ ಅಧಿಕಾರಿ ಪ್ರಭಾಕರ,
ಮಾಡಿತೋರಿಸುವುದಿಲ್ಲ ಆಡಂಬರ,
ಪ್ರತಿ ಕೆಲಸಕ್ಕು ತೋರಿಸುವರು ಆಕಾರ,
ಕೆಲವು ಸಿಬ್ಬಂದಿಗಳಿಗೆ ಇವರು ಖಾರ,
ಸೋಮಾರಿ ಸಿಬ್ಬಂದಿಗಳಿಗೆ ಇವರು ಭಾರ,
ಕೆಲಸಗಳು ಕಾಯಕವಾದುದರಿಂದ ಹಗುರ,
ಹುಡುಕಿದರೂ ಸಿಗುವುದಿಲ್ಲ ಅಹಂಕಾರ,
ಕೆಲಸ -ಕಾರ್ಯಗಳಲ್ಲಿಲ್ಲ ಪ್ರಚಾರ,
ಹೀಗಿದೆ ಇವರ ಸರಳ ಜೀವನದ ಸಾಕಾರ.
ಚಂದನ
18.10.1992
ಬಹಳ ಓದುಗರ ಪ್ರೀತಿಯೆ ’ಚಂದನ’
ಕಡಿಮೆ ದರವೇ ಎಲ್ಲ ಓದುಗರಿಗೆ ಬಹುಮಾನ,
ಕೊಂಡು ಓದುವವರಿಗೆ ಇರುವುದು ಮಾನ,
ಇಲ್ಲದಿದ್ದಲ್ಲಿ ಸಿಗುವುದು ಅವರಿಗೆ ಅವಮಾನ,
ವಿಷಯ ತಿಳಿಯಲಿಕ್ಕೆ ಕಾದಿರುವರು ಜನ,
ಕೊಂಡು ಓದಿ ಬೆಳೆಸಿಕೊಳ್ಳಿ ಕನ್ನಡದ ಅಭಿಮಾನ.
ಬಸವ
18.10.1992
‘ಬ’ಲ್ಲಿದವರೊಂದಿಗೆ ಮಾತ್ರ ‘ಸ’ಜ್ಜನರ ಸಂಗ ಇರಲೆಂದು, ಭಕ್ತಿಯಿಂದಲೇ ಜೀವನದ ‘ವ’ಸಾಯವನ್ನು ಮಾಡಿದೆ ನಮ್ಮ ಬಸವ.
’ಸಮಾಚಾರ’ದ –ರಾಜಕುಮಾರ
9.11.1992
ಕನ್ನಡ ಜನತೆಗೆ ರಾಜ-ರಾಜಕುಮಾರ,
ಯೋಗಾಭ್ಯಾಸ ಮಾಡಿಸಿತು ಇವನ ಸದಾ-ಕುಮಾರ,
ದೇಹ ಮನಸ್ಸಿನಷ್ಟೇ ಯಾವಗಲೂ ಹಗುರ,
ಇವನ ಪ್ರೀತಿಯ ವಾರ ಗುರುವಾರ,
ಚಿತ್ರರಂಗದಲ್ಲಿ ಯಾವಗಲು ವೀರ,
ಮುಖವೂ ಸಹ ಮನಸ್ಸಿನಷ್ಟೇ ಸುಂದರ,
ಮಡದಿ ಪಾರ್ವತಮ್ಮ ನೋಡಿಕೊಳ್ಳುವರು ವ್ಯವಹಾರ,
ಶಾಂತಿ ನೆಮ್ಮದಿಗಾಗಿ ಚಿತ್ರರಂಗದಿಂದ ದೂರ,
ಏರುತ್ತಿದ್ದ ಗುಣಮೌಲ್ಯ ಕಂಡು ಎತ್ತಿದರು ಕೆಲವರು ಅಪಸ್ವರ,
ಆದರೂ ಎಲ್ಲರಿಗೂ ಮಾಡುವನು ಸಮಾನ ಉಪಚಾರ,
ಹುಡುಕಿದರೂ ಸಿಗುವುದಿಲ್ಲ ಮನದಲ್ಲಿ ಅಪಚಾರ,
ಮನದಲ್ಲೂ ಮೂಡುವುದಿಲ್ಲ ವ್ಯಭಿಚಾರ,
ಆದಕಾರಣ ಈತ ಯಾವಾಗಲೂ ಕರ್ಮವೀರ,
ಸಂಸ್ಕೃತಿಯಲ್ಲೇ ತೋರಿಸಿದ ಸಾಕ್ಷಾತ್ಕಾರ,
ನಿಯಮಗಳನ್ನು ಕಲಿಸಿತು ಇವನ ಗಡಿಯಾರ,
ಆಡಳಿತಕ್ಕೆ ಕರೆಸಿಕೊಳ್ಳಲು ಪ್ರಯತ್ನಿಸಿತು ಸರ್ಕಾರ,
ಆದರೆ ಮನಬಿಚ್ಚಿ ಹೇಳಿದ ತನ್ನ ವಿಚಾರ,
ಇವನ ಚಿತ್ರಗಳನ್ನು ನೋಡಿ ಆದರು ಜನತೆ ಮಯೂರ,
ಇದಕೆಲ್ಲ ಕಾರಣ ಇವನಲ್ಲಿರುವ ಸಂಸ್ಕಾರ,
ತಂದೆಯ ಆರ್ಶೀವಾದವಿರುವುದು ಅಪಾರ,
ವಾರದ ಎಲ್ಲಾ ದಿನಗಳು ಶುಭವಾರ,
ಯಾರೇನೂ ಮಾಡಿದರು ಆಗುವುದಿಲ್ಲ ಇವನು ಬಕರ,
ದುಷ್ಟ ಜನಗಳಿಗೆ ಆಗುವನು ನಾಗರ,
ಚಿತ್ರಗಳಲ್ಲಿ ಮಾಡಿರುವ ಗುಣಗಳು ತರ ತರ,
ಇವ ಬಂದಾಗ ಆಗುವುದು ಜಾಗ ಜನರ ಸರೋವರ,
ಎಲ್ಲ ತಾರೆಗಳಲ್ಲಿ ಇವ ವಿಶೇಷ ತಾರಾ,
ಬಡವರು ಬಂದಾಗ ಸಿಗುವುದು ಪರಿಹಾರ,
ಆರೋಗ್ಯಕ್ಕೆ ಪಾಲಿಸುವನು ಕಟ್ಟುನಿಟ್ಟು ಆಹಾರ,
ಅದೇ ಅವನ ಆರೋಗ್ಯದ ಚಮತ್ಕಾರ,
ಕನ್ನಡ ಜನತೆ ಬಯಸುವುದು ಅವನ ಅಮರ,
ತನ್ನಲ್ಲೂ ಜನತೆಯಲ್ಲು ನೋಡಲಿಲ್ಲ ಅಂತರ,
ನಡೆಯಲ್ಲಿ ತೋರಿಸುವನು ತಾನು ಕಿಂಕರ,
ಮಾಡುವುದಿಲ್ಲ ಮನೆಯಲ್ಲೂ ದರ್ಬಾರ,
ಭಕ್ತಿಗೀತೆಗಳನ್ನು ಹಾಡಿ ಆದ ಧರ್ಮವೀರ,
ಮನಸ್ಸು ಹತೋತಿಯಲ್ಲಿರುವುದರಿಂದ ಇವನು ಆರೋಗ್ಯಕರ,
ಪ್ರತೀಕಾರಕ್ಕೆ ಅವನಲ್ಲಿ ಇಲ್ಲ ’ಪ್ರತೀಕಾರ’
ಇದರಿಂದ ಆದ ವಾತಾವರಣ ಆಹ್ಲಾದಕರ,
ಬಹು ಕನ್ನಡ ಜನತೆಗೆ ಇವನು ಬಂಗಾರ,
ಇವ ಉಟ್ಟರೆ ಬಹು ಚೆಂದ ಅಂದ ಪೀತಾಂಬರ,
ಚಿತ್ರೋದ್ಯಮ ಬೆಳೆಯಲಿಕೆ ಆಗಬೇಕು ಪ್ರಾಧಿಕಾರ,
ಆಗ ಇವನ ಮನಸಿಗೆ ಸಿಕ್ಕಿತು ಪರಿಹಾರ,
ಇವ ನಲೆಸಿರುವ ಜಾಗವೇ ಸ್ವರ್ಣಕುಟೀರ,
ಯಾರ ಮನಸಿನಲ್ಲು ತೋಡಿಸಲಿಲ್ಲ ಕಂದರ,
ಭಕ್ತಿ ಬೆಳೆಸಿದನು ಮನದಲ್ಲಿ ಆದ ಮೇಲೆ ಕಂಬಾರ,
ಏಳಲಿಲ್ಲ ಮನಸಿನಲ್ಲಿ ವಿಕಾರ,
ಕೊಡಲಿಕ್ಕೆ ಹೋದಾಗ ಬೇಡವೆಂದ ಅಧಿಕಾರ,
ಏಕೆಂದರೆ ಆಗಲೇ ಸೇರಿತ್ತು ಗುಣ ಗೌರೀಶಂಕರ,
ಮದ್ಯ ವಯಸ್ಸಿನಲ್ಲಿ ಇವನಾಗಿದ್ದ ರಣಧೀರ,
ಬೇರೆಯವರಿಗೆ ಆಯಿತು ಅವಾಂತರ,
ಗುಣದಲ್ಲಿ ನಡೆಯಲ್ಲಿ ಇಲ್ಲ ಅಜಗಜಾಂತರ,
ಇವ ಕುಡಿಯುವುದಿಲ್ಲ ಮದ್ಯಸಾರ,
ಆದರೆ ಬಿಡುವುದಿಲ್ಲ ಕುಡಿಯುವುದೆ ಸಂಗೀತ ಸಾರ,
ಮುದ್ದು ಮುದ್ದಾಗಿದೆ ಇವನ ಹೆಸರ ಅಕ್ಷರ,
ಕೇಳುವ ಪ್ರಶ್ನೆಗಳಿಗೆ ಸಿಗುವುದು ಸಂಕ್ಷಿಪ್ತ ಉತ್ತರ,
ಇದುವೇ ರಾಜಕುಮಾರನ ಸಮಾಚಾರ,
ಹೋಗಿ ಬರುವೆ ಪುನಃ ಸಿಗುವೆ ನಮಸ್ಕಾರ.
ಏಕಾಂಗಿ : ಸತ್ಯ - ವಿಡಂಬನೆ
28.10.03 - 10.25.a.m.
ಮನೆ ಪಕ್ಕ ಪಕ್ಕ,
ಆದರೆ ಮನ ಮನ ದೂರ ದೂರ,
ಕಾರಣ ಸತ್ಯ.
ದೂರಿದ್ದಕ್ಕೆ ಪ್ರತಿಭಟನೆ,
ಪಕ್ಕದ ಅವರ 3 ಜಾಡಿ ಜಾಗಕ್ಕೆ/ಜಾಗದಲ್ಲಿ ಗಾಳಿ-ಬೆಳಕೂ ಬಿಡದಿದ್ದಕ್ಕೆ ಪ್ರತಿಭಟನೆ,
ಕಾನೂನು ತಿಳಿಸಿದ್ದಕ್ಕೂ ಪ್ರತಿಭಟನೆ,
ನೆರೆಹೊರೆಯವರು ಕರೆಸಿ ಹೇಳಿದ್ದಕ್ಕೂ ಪ್ರತಿಭಟನೆ.
ಹೆಂಡತಿ ಮಾತಿಗೆ ಬೆಲೆಯಿಲ್ಲ,
ಮಾವನ ಮಾತನು ಕೇಳಲ್ಲ,
ಬೇರೆಯವರ ಬುದ್ದಿ ಮಾತು ಹಿಡಿಸೋಲ್ಲ,
ಕಟ್ಟಿದ 30' X 45' ರಲ್ಲಿ
ಪೂರ್ತಿ ಕಟ್ಟಡ.
ಸುತ್ತ ಮುತ್ತ ಗಾಳಿ - ಬೆಳಕಿಗೆ ಜಾಗವಿಲ್ಲ,
ಅವನಿಗೂ ತೊಂದರೆ,
ನಮಗೂ ತೊಂದರೆ,
ಗಾಳಿ - ಬೆಳಕು ದೂರ ದೂರ,
ಅಹಂಕಾರದಿಂದ ಆದ ದೂರ,
ನೆರೆಹೊರೆಯವರಿಂದ ಆದ ದೂರ,
ನಮ್ಮ ಹಿರಿಯಣ್ಣನ ಹಾಗೆ,
ಆದ ಇನ್ನೊಬ್ಬ ಭೂತಯ್ಯ.
ಕೊನೆಗೆ ಪೂರ್ತಿ ಆದ ಏಕಾಂಗಿ,
ಮುಂದೆ ಆಗುವನು ಎಡಬಿಡಂಗಿ.